ಕಾಂಗರೂ ಹೆಗ್ಗಣ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 ದಕ್ಷಿಣ ಆಸ್ಟ್ರೇಲಿಯದ ನಿವಾಸಿಯಾದ ಒಂದು ಪುಟ್ಟದಾದ ಬಿಲವಾಸಿ ಸಸ್ತನಿ (ಮಾಸ್ರ್ಯೂಪಿಯಲ್ ಮೋಲ್). ಕಾಂಗರೂ ಮುಂತಾದುವುಗಳಲ್ಲಿರುವಂತೆ ಅಪ್ರಬುದ್ಧಾವಸ್ಥೆಯಲ್ಲಿ ಹುಟ್ಟುವ ಮರಿಗಳನ್ನು ಸಾಕಲು ಸಹಕಾರಿಯಾದ ಹೊಟ್ಟೆಚೀಲವಿರುವುದರಿಂದಲೂ ನೋಡಲು ಇದು ಮುಖಮಲ್ ಹೆಗ್ಗಣ ಅಥವಾ ನೆಲಗುಮ್ಮದ (ಮೋಲ್) ಹಾಗಿರುವುದರಿಂದಲೂ ಇದಕ್ಕೆ ಕಾಂಗರೂ ಹೆಗ್ಗಣ ಎಂದು ಹೆಸರು. ಕಾಂಗರೂ, ವಾಲಬೀ ಮುಂತಾದ ಪ್ರಾಣಿಗಳನ್ನೊಳಗೊಂಡ ಮಾಸ್ರ್ಯೂಪಿಯೇಲಿಯ ಗಣಕ್ಕೂ ನೋಟೊರಿಕ್ಟಿಡೀ ಕುಟುಂಬಕ್ಕೂ ಸೇರಿದೆ. ಇದರ ಶಾಸ್ತ್ರೀಯನಾಮ ನೋಟೊರಿಕ್ಟೀಸ್ ಟಿಫ್ಲಾಪ್ಸ್.

 ಸುಮಾರು 90-180 ಮಿಮೀ. ಉದ್ದಕ್ಕೆ ಬೆಳೆಯುವ ಸಣ್ಣಗಾತ್ರದ ಪ್ರಾಣಿಯಿದು. ದೇಹದ ಮೇಲೆಲ್ಲ ಬಿಳಿಯ ಅಥವಾ ಹೊಂಬಣ್ಣದ ನಿಡಿದಾದ ರೇಷ್ಮೆಯಂಥ ಕೂದಲಿನ ಹೊದಿಕೆಯುಂಟು. ಬಾಲ ತುಂಬ ಚಿಕ್ಕದು; ಕೊಳವೆಯಂತಿದೆ; ಬಲು ಗಟ್ಟಿಯಾದುದೂ ಚರ್ಮಿಲವೂ ಆಗಿದೆ. ಅದರ ತುದಿಯಲ್ಲಿ ಕೊಂಬಿನಂಥ ಬುಗುಟಿದೆ. ಮೂಗಿನ ಮೇಲೂ ಕೊಂಬಿನಂಥ ಫಲಕವೊಂದಿದೆ. ಕಾಂಗರೂ ಹೆಗ್ಗಣಕ್ಕೆ ಹೊರಕಿವಿಗಳೇ ಇಲ್ಲ. ಇದರ ಬದಲು ತಲೆಯ ಮೇಲ್ಭಾಗದ ಎರಡೂ ಪಕ್ಕಗಳಲ್ಲಿ ಬರಿಯ ಎರಡು ತೂತುಗಳಿವೆ. ಅಲ್ಲದೆ ಈ ಪ್ರಾಣಿಗೆ ಬೇರೆ ಸಸ್ತನಿಗಳಲ್ಲಿರುವಂಥ ಕಣ್ಣುಗಳೂ ಇಲ್ಲ, ಹಿಂದೆ ಇದ್ದಿರಬಹುದಾದಂಥ ಕಣ್ಣುಗಳ ಅವಶೇಷವಾಗಿ ಎರಡು ಗುಳಿಗಳು ಮಾತ್ರ ಇವೆ. ಇವಕ್ಕೆ ಕನೀನಿಕೆಗಳು (ಪ್ಯೂಪಿಲ್ಸ್) ಇಲ್ಲ, ಮುಂಗಾಲಿನ ಪಾದಗಳಲ್ಲಿ ಎರಡೆರಡು ದೊಡ್ಡ ಪಂಜಗಳಿವೆ. ಇವು ಬಿಲ ತೋಡಲು ಅನುಕೂಲವಾಗಿವೆ. ಹಿಂಗಾಲಿನ ಪಾದಗಳಲ್ಲೂ ಮೂರು ಮೂರು ಪಂಜಗಳಿವೆ. ಕಾಂಗರೂ ಹೆಗ್ಗಣಗಳು ನೆಲದಲ್ಲಿ ಬಿಲ ತೋಡಿ ಅವುಗಳಲ್ಲಿ ವಾಸಿಸುತ್ತವೆ. ಇವುಗಳ ಆಹಾರ ಮುಖ್ಯವಾಗಿ ಎರೆಹುಳುಗಳು, ಕೀಟಗಳು ಇತ್ಯಾದಿ. ಆಹಾರ ತಿನ್ನುವಾಗ ಬಲು ಉದ್ರೇಕಗೊಂಡಂತೆ ಇರುತ್ತದೆ. ತಿನ್ನುತ್ತಿರುವಾಗಲೇ ಹಠಾತ್ತನೆ ನಿದ್ದೆ ಮಾಡುವುದೂ ಅಷ್ಟೇ ಚುರುಕಾಗಿ ಎಚ್ಚೆತ್ತು ಆಹಾರ ಭಕ್ಷಣೆಯನ್ನು ಮುಂದುವರಿಸುವುದೂ ಇದರ ಸೋಜಿಗಗಳು.  ಇವು ಬಹಳ ವಿರಳ ಪ್ರಾಣಿಗಳಾದುದರಿಂದ ಇವುಗಳ ಸಂತಾನೋತ್ಪತ್ತಿಯ ಕ್ರಮದ ಬಗ್ಗೆ ಏನೂ ಗೊತ್ತಿಲ್ಲ.

(ಬಿ.ಎಚ್.ಎಂ.)